ಭೂಮಿಯ ನಿಮ್ನೋನ್ನತಗಳು

	ಭೂಮಿಯ ಮೇಲ್ಪದರದಲ್ಲಿ ಕಾಣಬರುವ, ಹೆಚ್ಚು ವಿಕೃತಿಗೊಂಡಿಲ್ಲದ, ಸಾಧಾರಣ ರೀತಿಯ ಬಗ್ಗಿರುವಿಕೆ (ಕ್ರಸ್ಟಲ್ ವಾರ್ಶಿಂಗ್). ಇವು ಬೇರೆ ಬೇರೆ ಕಾರಣಗಳಿಂದ ಮತ್ತು ವಿವಿಧಗತಿಗಳಲ್ಲಿ ಉಂಟಾಗುತ್ತವೆ. ಇವನ್ನು ಉಬ್ಬರವಿಳಿತ ಮಾಪಕಗಳಿಂದಲೂ (ಟೈಡ್‍ಗೇಜಸ್), ಪ್ರವಣಮಾಪಕಗಳಿಂದಲೂ (ಟಿಲ್ಟ್‍ಮೀಟರ್ಸ್) ಭೂಗಣಿತ (ಜಿಯೋಡೆಟಿಕ್) ಸರ್ವೇಕ್ಷಣೆಗಳಿಂದಲೂ ಭೂವೈe್ಞÁನಿಕ ಸಮೀಕ್ಷೆಯಿಂದಲೂ ಅಳೆಯಬಹುದು.

	ಕಳೆದ 9950 ವರ್ಷಗಳಿಂದಿಂದೀಚೆಗೆ ಉತ್ತರ ಫಿನ್ಲೆಂಡ್ ಭೂಪ್ರದೇಶ ಸುಮಾರು 476 ಮೀಟರ್ ಎತ್ತರಕ್ಕೆ ತಳ್ಳಲ್ಪಟ್ಟಿದೆ ಎಂದು ಭೂವಿe್ಞÁನಿಗಳು ಅಂದಾಜು ಮಾಡಿದ್ದಾರೆ. ಇದಕ್ಕೆ ಅಲ್ಲಿಯ ಮಂಜುಗೆಡ್ಡೆ ಕರಗುವುದೇ ಕಾರಣ. ಇಂದಿಗೂ ಆ ಪ್ರದೇಶದಲ್ಲಿ ಭೂಮಿಯ ಮೇಲ್ಮುಖಚಲನೆ ವರ್ಷವೊಂದಕ್ಕೆ 1.3 ಸೆಂಮೀನಷ್ಟು ನಡೆಯುತ್ತಿದೆ. ಉತ್ತರ ಫಿನ್ಲೆಂಡಿನಲ್ಲಿ ಹೀಗಿದ್ದರೂ ಡೆನ್ಮಾರ್ಕಿನಲ್ಲಿಯ ಸಮುದ್ರ ಮಟ್ಟ ಮಾತ್ರ ಸ್ಥಿರವಾಗಿಯೇ ಇದೆ. ಹಡ್ಸನ್ ಕೊಲ್ಲಿಯ ಮಟ್ಟ ಕೂಡ ಏರುತ್ತಿದೆ ಮತ್ತು ಗ್ರೇಟ್ ಲೇಕ್ಸ್ ಸರೋವರಗಳೂ ವರ್ಷವೊಂದಕ್ಕೆ 0.1 ಸೆಂಮೀ ನಂತೆ ದಕ್ಷಿಣಕ್ಕೆ ಓರೆಯಾಗುತ್ತಿವೆ ಎಂದು ತಿಳಿದುಬಂದಿದೆ. 

	ನದೀ ಮುಖಜಭೂಮಿಯಲ್ಲಿ ಶೇಖರಣೆಯಾಗುವ ವಸ್ತುಗಳ ಭಾರದಿಂದ ಅನೇಕ ಕಡಲತೀರಗಳು ಕುಸಿಯುತ್ತಿವೆ. ಉದಾಹರಣೆಗೆ, ಹಾಲೆಂಡಿನ ತೀರಪ್ರದೇಶ ಮತ್ತು ಉತ್ತರ ಅಮೆರಿಕದ ಅಟ್ಲಾಂಟಿಕ್ ಹಾಗೂ ಗಲ್ಫ್ ತೀರಗಳು ವರ್ಷವೊಂದಕ್ಕೆ 0.5 ಸೆಂಮೀನಂತೆ ಕುಸಿಯುತ್ತಿವೆ. ಇದರಿಂದಾಗಿ, ಆ ತೀರಗಳ ಸಮುದ್ರಮಟ್ಟ ವರ್ಷವೊಂದಕ್ಕೆ 0.1 ಸೆಂಮೀನಂತೆ ಏರುತ್ತಿದೆ. ಜಪಾನ್ ಮತ್ತು ಉತ್ತರ ಅಮೆರಿಕದ ಪೆಸಿಫಿಕ್ ತೀರಗಳಂಥ ಕೆಲವು ಭೂಭಾಗಗಳಲ್ಲಿ ಪರ್ವತ ಬೆಳವಣಿಗೆ ಹಾಗೂ ಸ್ತರಭಂಗಗಳ ಕಾರಣದಿಂದಾಗಿ ಆಗಾಗ್ಗೆ ಭೂಕಂಪನಗಳಾಗುತ್ತಿರುತ್ತವೆ. ಇಂಥ ಸಂದರ್ಭಗಳಲ್ಲಿ ಭೂಮಿಯ ಮೇಲ್ಪದರ ಕೆಲವಾರು ಮೀಟರುಗಳಷ್ಟು ಎತ್ತರಕ್ಕೆ ದೂಡಲ್ಪಡುತ್ತದೆ. ಹಾಗೆಯೇ ಕ್ಯಾಲಿಪೋರ್ನಿಯ ಮತ್ತು ನ್ಯೂ ಜೀಲೆಂಡ್ ಪ್ರದೇಶಗಳಲ್ಲಿ ವರ್ಷವೊಂದಕ್ಕೆ 5 ಸೆಂಮೀನಂತೆ ಭೂಮಿಯ ಮೇಲ್ಪದರದ ಅಡ್ಡಚಲನೆಯನ್ನು ಗಮನಿಸಬಹುದು.

	ಎತ್ತರದ ಪರ್ವತಗಳು ಹಾಗೂ ಆಳದ ತೈಲ ಬಾವಿಗಳಲ್ಲಿ ದೊರಕಿರುವ, ವಕ್ರಗೊಂಡಿರುವ ಜಲಜ ಶಿಲೆಗಳು ಬಹಳಷ್ಟು ಹಿಂದೆಯೇ ವಿಶಾಲವಾದ ಭೂನಿಮ್ನೋನ್ನತಗಳು ಉಂಟಾಗಿದ್ದುದರ ಬಗ್ಗೆ ಕುರುಹು ನೀಡುತ್ತವೆ. ಹವಾಯಿಯ ಜ್ವಾಲಾಮುಖಿಗಳ ಸುತ್ತಲೂ ಮುಳುಗಡೆಯಾಗಿರುವ ತೀರಗಳು ಮತ್ತು ಕಂದಕಗಳು ಭಾರದಿಂದ ಆಗಿರುವ ವಕ್ರತೆಯನ್ನು ತೋರಿಸುತ್ತಿವೆ.

	ವಿಶಾಲ ಭೂನಿಮ್ನೋನ್ನತಗಳಾಗುವಿಕೆಗೆ ಇನ್ನೂ ಹಲವಾರು ಕಾರಣಗಳಿವೆ. ಅವುಗಳ ಪೈಕಿ ಮುಖ್ಯವಾದವು: ಧ್ರುವ ಪ್ರದೇಶಗಳ ಅಲೆತ, ಭೂಖಂಡಗಳ ಅಲೆತ, ಭೂಮಿಯ ಒಳಭಾಗದಲ್ಲಿ ನಡೆಯುತ್ತಿರುವ ಉಷ್ಣನಯನ ಪ್ರವಾಹಗಳು ಇತ್ಯಾದಿ.
(ಸಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ